ನಂದಿಕೇಶ್ವರ 1-

ಸಂಗೀತ ಮತ್ತು ಕಾಮಶಾಸ್ತ್ರಕ್ಕೆ ವಿಶೇಷ ಕೊಡುಗೆ ನೀಡಿದ ಈತನಿಗೆ ಸಂಸ್ಕøತ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ಈತನ ಕಾಲ, ದೇಶ ಮತ್ತು ಜೀವಿತಾದಿ ವಿಷಯ ಅಸ್ಪಷ್ಟ ಹಾಗೂ ಸಂದಿಗ್ಧ. ಇವನ ಹೆಸರಿನಲ್ಲಿ ಅಭಿನಯವನ್ನು ಕುರಿತಾದ ಕೃತಿಯಲ್ಲದೆ ತಾಳ, ರಸ, ಯೋಗ, ತಂತ್ರ, ಕಾಮಶಾಸ್ತ್ರ, ಪೂರ್ವಮೀಮಾಂಸೆ ಮತ್ತು ಲಿಂಗಾಯತ ಶೈವ ಮತಗಳ ಕೃತಿಗಳೂ ಇವೆ. ತಾಳಲಕ್ಷಣ, ತಾಳಾದಿಲಕ್ಷಣ ಮತ್ತು ತಾಳಾಭಿನಯ ಲಕ್ಷಣಗಳೆಂಬ ಮೂರು ಕೃತಿಗಳು ಈತನ ಸಂಬಂಧವನ್ನು ಹೊಂದಿವೆ.

	ರಾಜಶೇಖರ ತನ್ನ ಕಾವ್ಯಮೀಮಾಂಸೆಯಲ್ಲಿ ರಸವಿಚಾರವನ್ನು ಪ್ರಸ್ತಾಪಿಸಿರುವ ನಂದಿಕೇಶ್ವರನನ್ನು ಹೆಸರಿಸಿದ್ದಾನೆ. ಯೋಗತಾರಾವಳಿ ಎಂಬ ಕೃತಿಯೊಂದು ಈತನ ಹೆಸರಿನಲ್ಲಿದೆ. ನಂದಿಕೇಶ್ವರತಿಲಕ ಎಂಬ ಗ್ರಂಥವೂ ಈತನ ಹೆಸರಿನಲ್ಲಿದೆ. ಶಿವ ಜ್ಯೋತೀಶ್ವರನ ಪಂಚಸಾಯಕ ನಂದಿಕೇಶ್ವರ ಕಾಮಶಾಸ್ತ್ರವನ್ನು ಬರೆದಿರುವುದಾಗಿ ಸೂಚಿಸುತ್ತದೆ. ವಾತ್ಸಾಯನ ತನ್ನ ಸೂತ್ರದಲ್ಲಿ ಈತನ ಹೆಸರನ್ನು ಹೇಳಿದ್ದಾನೆ. ಪೂರ್ವಮೀಮಾಂಸ ಕೃತಿಯಾದ ಪ್ರಭಾಕರವಿಜಯ ಮತ್ತು ಶೈವಗ್ರಂಥವಾದ ಲಿಂಗಧಾರಣಚಂದ್ರಿಕಾ ಎಂಬ ಎರಡು ಗ್ರಂಥಗಳು ಈತನ ಹೆಸರಿನಲ್ಲಿವೆ. ಈ ಎಲ್ಲ ನಂದಿಕೇಶ್ವರರೂ ಒಬ್ಬನೋ ಅಥವಾ ಬೇರೆ ಬೇರೆಯೋ ನಿರ್ಣಯಿಸುವುದು ಕಷ್ಟ. ಆದರೆ ತಾಳ ಮತ್ತು ಅಭಿನಯ ಗ್ರಂಥಗಳನ್ನು ಬರೆದಿರುವ ನಂದಿಕೇಶ್ವರ ಒಬ್ಬನೇ ಆಗಿರಬೇಕು; ಯೋಗ, ತಂತ್ರ ಮತ್ತು ಪೂರ್ವಮೀಮಾಂಸೆಯ ಕರ್ತೃ ಬೇರೆಯವನಾಗಿರಬೇಕೆಂದು ತೋರುತ್ತದೆ.

	ಈತ ಸಂಗೀತಶಾಸ್ತ್ರಕ್ಕೆ ಮೂಲಾಧಾರವೆಂದು ಸಂಗೀತರತ್ನಾಕರದ ಕರ್ತೃ ಶಾಙ್ರ್ಗದೇವ ಅಭಿಪ್ರಾಯಪಟ್ಟಿದ್ದಾನೆ. ಸಂಗೀತದೊಡನೆ ತಾಳ ಮತ್ತು ಅಭಿನಯಗಳು ಈತ ಕಲೆಗೆ ಕೊಟ್ಟಿರುವ ವಿಶೇಷ ಕೊಡುಗೆಗಳು.

	ಈತ ಮೂಲತಃ ಮತ್ರ್ಯ. ಶಿಲಾದ ಎಂಬ ಕುರುಡಿ ತನಗೊಬ್ಬ ಅಮತ್ರ್ಯ ಪುತ್ರ ಬೇಕೆಂದು ಶಿವನನ್ನು ಪ್ರಾರ್ಥಿಸಿದಳೆಂದೂ ಶಿವ ನಂದಿಯೆಂಬ ಮಗನನ್ನು ಕರುಣಿಸಿದನೆಂದೂ ಈತ ಮುಂದೆ ನಂದಿಕೇಶ್ವರನೆಂಬ ಹೆಸರಿನಿಂದ ಪ್ರಸಿದ್ಧಿಗೆ ಬಂದನೆಂದೂ ಶಿವ ಈತನನ್ನು ಅಮತ್ರ್ಯನನ್ನಾಗಿ ಮಾಡಿ ತನ್ನ ಗಣದ ಮುಖಂಡನನ್ನಾಗಿ ನೇಮಿಸಿದನೆಂದೂ ಲಿಂಗಪುರಾಣದಲ್ಲಿ ಪ್ರತಿಪಾದಿತವಾಗಿದೆ.

	ರಾಮಕೃಷ್ಣನೆಂಬ ಕವಿ ತಂಡುವೇ ನಂದೀ ಅಥವಾ ನಂದೀಕೇಶ್ವರನೆಂದು ಗುರುತಿಸಿ, ಈತ ನಂದೀಶ್ವರಸಂಹಿತೆಯ ಕರ್ತೃವೆಂದು ಅಭಿಪ್ರಾಯಪಟ್ಟಿದ್ದಾನೆ. ನಾಟಕಕ್ಕೆ ಸಂಬಂಧಿಸಿದ ಒಂದು ಅಧ್ಯಾಯವನ್ನುಳಿದು ಈ ಗ್ರಂಥದ ಉಳಿದ ಅಧ್ಯಾಯಗಳು ಉಪಲಬ್ಧವಾಗಿಲ್ಲ. ದೊರೆತಿರುವ ಈ ಒಂದು ಅಧ್ಯಾಯ ಕ್ರಿ.ಶ.ದ ನಾಟಕದ ವಿಷಯವನ್ನು ಹೇಳುವಂತಿದೆ.

	ದಕ್ಷಿಣ ಭಾರತದಲ್ಲಿ ನಂದೀಶ್ವರ ದೇವತೆಯ ಪ್ರಭಾವ ಹೆಚ್ಚಾಗಿರುವುದರಿಂದ ಈ ಕವಿ ದಕ್ಷಿಣದವನಾಗಿರಬೇಕು. ಈತ ನಂದೀಶ್ವರಸಂಹಿತೆಯ ಕರ್ತೃವೆಂದು ಒಪ್ಪಿಕೊಳ್ಳುವುದಾದರೆ ಈತನ ಕಾಲವನ್ನು ಕೊಂಚಮಟ್ಟಿಗೆ ಊಹಿಸಲು ಸಾಧ್ಯವಿದೆ. ಸಂಗೀತಶಾಸ್ತ್ರ ಗ್ರಂಥವನ್ನು ಬರೆದಿರುವ ಮಾತಂಗ ಈತನ ಅಭಿಪ್ರಾಯವನ್ನು ಉದ್ಧರಿಸಿದ್ದಾನೆ. ಕ್ರಿ.ಶ.5ನೆಯ ಶತಮಾನದಲ್ಲಿ ಹುಟ್ಟಿರಬಹುದೆಂದು ಹೇಳಲಾಗಿರುವ ತಮಿಳು ಗ್ರಂಥ ಶಿಲಪ್ಪದಿಕ್‍ರಮ್‍ನಲ್ಲಿ ಮಾತಂಗನನ್ನು ಹೆಸರಿಸಲಾಗಿದೆ. ಆದುದರಿಂದ ಮಾತಂಗನ ಕಾಲ ಕ್ರಿ.ಶ.4ನೆಯ ಶತಮಾನವಾದರೂ ಆಗಿರಬಹುದು. ಮಾತಂಗ ನಂದಿಯ ಅಭಿಪ್ರಾಯವನ್ನು ಉದ್ಧರಿಸುವುದರಿಂದ ನಂದಿಕೇಶ್ವರ ಅವನಿಗಿಂತಲೂ ಒಂದು ಶತಮಾನವಾದರೂ ಹಿಂದಿನವನಾಗಿರಬೇಕಾಗುತ್ತದೆ. ಇದರಿಂದ ನಂದಿಕೇಶ್ವರನ ಕಾಲ ಕ್ರಿ.ಶ.3ನೆಯ ಶತಮಾನವೆಂದು ಊಹಿಸಬೇಕಾಗುತ್ತದೆ. ದೊರೆತಿರುವ ಹಸ್ತಪ್ರತಿಗಳ ಆಧಾರಗಳಿಂದ ನಂದಿಕೇಶ್ವರನ ಕಾಲವನ್ನು ಕ್ರಿ.ಶ.4ನೆಯ ಶತಮಾನದಿಂದ 13ನೆಯ ಶತಮಾನದವರೆಗೂ ಎಳೆದಾಡಲಾಗಿದೆ.

	ನಂದಿ (ನಂದಿಕೇಶ್ವರ) ಸಂಗೀತಶಾಸ್ತ್ರ ಪ್ರವೇಶಕ್ಕೆ ಮೊಟ್ಟಮೊದಲಿಗೆ ಶಿವನಿಂದ ದೀಕ್ಷೆಪಡೆದುದಾಗಿ ತಿಳಿದುಬರುತ್ತದೆ. ವಾತ್ಸ್ಯಾಯನ (ಕ್ರಿ.ಪೂ. 4 ಅಥವಾ 3ನೆಯ ಶತಮಾನ) ಮಹಾದೇವಾನುಚರಶ್ಚ ನಂದೀ ಸಹಸ್ರೇಣಾಧ್ಯಾಯಾನಾಂ ಪೃಥಕ್ಕಾಮಸೂತ್ರಂ ಪ್ರೋವಾಚ ಎಂದು ತನ್ನ ಕೃತಿಯಲ್ಲಿ ತಿಳಿಸಿದ್ದಾನೆ. ಮುಂದಿನ ಸಂಗೀತಗ್ರಂಥಕಾರರು ನಂದಿಕೇಶ್ವರನದೊಂದು ವಿಶೇಷ ಸಂಗೀತ ಶಾಖೆಯೆಂದು ಭಾವಿಸಿ ಈತನ ಅಭಿಪ್ರಾಯಗಳನ್ನು ಭರತನ ಅಭಿಪ್ರಾಯಗಳೊಡನೆ ಹೋಲಿಸಿದ್ದಾರೆ. ಶಾಸ್ತ್ರ ರಚನೆಯಲ್ಲಿ ಭರತನ ದೃಷ್ಟಿ ನಾಟ್ಯಸಂಗೀತಕ್ಕೆ ಸೀಮಿತಗೊಂಡಿದ್ದರೆ ಈತನ ದೃಷ್ಟಿ ಹಬ್ಬಹರಿದಿನಗಳು ಹಾಗೂ ಸಮಾರಂಭ ಸಂಭ್ರಮಗಳ ಸಂಗೀತಕ್ಕೆ ಮೀಸಲಾಗಿದೆ.

	4,000 ಶ್ಲೋಕಗಳುಳ್ಳ ಭರತಾರ್ಣವದಲ್ಲಿ ನಂದಿ ಇಂದ್ರನ ಕೋರಿಕೆಯಂತೆ ಇಂದ್ರನ ರಂಗಮಂಟಪದ ನಟನಾದ ಸುಮತಿಗೆ ಅಭಿನಯ ಕಲೆಯನ್ನು ಬೋಧಿಸಿದ. ಈ ಕೃತಿಯನ್ನು ನಂದಿಕೇಶ್ವರನದೆಂದೇ ಭಾವಿಸಲಾಗಿದೆ. ತಂಜಾವೂರಿನ ಭಂಡಾರದಲ್ಲಿರುವ ಹಸ್ತಪ್ರತಿಯಲ್ಲಿ 5ನೆಯ ಅಧ್ಯಾಯದಿಂದ 14ನೆಯ ಅಧ್ಯಾಯಗಳವರೆಗಿದ್ದು, ಅವು ಕೇವಲ ಅಭಿನಯವನ್ನು ಮಾತ್ರ ನಿರೂಪಿಸುತ್ತವೆ. ಈ ಸಮಗ್ರ ಕೃತಿಗೆ ಗುಹೇಶಭರತಲಕ್ಷಣವೆಂಬ ಶೀರ್ಷಿಕೆ ಇದೆ. ಇದರಲ್ಲಿ ಇತಿ ಶ್ರೀನಂದಿಕೇಶ್ವರ ವಿರಚಿತೇ ಭರತಾರ್ಣವೇ ನಾಟ್ಯಾರ್ಣವೇ ಸುಮತಿಬೋಧಿಕೆ ಸಪ್ತಲಾಸ್ಯ ಪ್ರಕರಣಂನಾಮ ಚತುರ್ದಶೋಧ್ಯಾಯಃ ಎಂಬ ಸಮಾಪ್ತಿವಾಕ್ಯವಿದೆ. ಈ ಅಧ್ಯಾಯವನ್ನೊಳಗೊಂಡ ಕೃತಿ ನಾಟ್ಯಾರ್ಣವವಾಗಿರಬೇಕು.

	ಭರತಾರ್ಣವದ ಸಂಗ್ರಹರೂಪವಾದ ಭರತಾರ್ಥಚಂದ್ರಿಕೆ ನಂದೀ ಮತ್ತು ಪಾರ್ವತಿಯರ ಸಂವಾದರೂಪದಲ್ಲಿದ್ದು ಅದೂ ಅಭಿನಯವನ್ನು ನಿರೂಪಿಸುತ್ತದೆ.

	13 ಅಧ್ಯಾಯಗಳನ್ನುಳ್ಳ ಅಭಿನಯದರ್ಪಣ ನಾನಾ ಬಗೆಯ ಹಸ್ತವಿನ್ಯಾಸಗಳನ್ನು ನಿರೂಪಿಸುತ್ತದೆ. ಈ ಕೃತಿ ಇಂದ್ರನ ಕೋರಿಕೆಯಂತೆ ನಂದಿ ಸುಮತಿಗೆ ಹೇಳಿದ ರೂಪದಲ್ಲಿದೆ. ಇದು ಭರತಾರ್ಣವದ ಒಂದು ಅಧ್ಯಾಯವಾಗಿರಬೇಕು ಮತ್ತು ಭರತಾರ್ಣವಕ್ಕೆ ನಂದಿಭರತಂ ಎಂಬ ಮತ್ತೊಂದು ಹೆಸರಿರಬೇಕು.

	ಅರ್ವಾಚೀನರು ಭರತ ಮತ್ತು ನಂದಿಕೇಶ್ವರರ ತತ್ತ್ವ ಮತ್ತು ಪರಿಭಾಷೆಯಲ್ಲಿ ಬಹಳ ಮತಭೇದವಿದೆಯೆಂದು ಅಭಿಪ್ರಾಯಪಡುತ್ತಾರೆ. ಅಭಿನವಗುಪ್ತ (ಕ್ರಿ.ಶ. 1013) ಮೃದಂಗದ ವಿಷಯವನ್ನು ಪ್ರತಿಪಾದಿಸುವಲ್ಲಿ ನಂದಿಮತವೆಂದು ಒಂದು ಪದ್ಯವನ್ನು ಉದ್ಧರಿಸಿದ್ದಾನೆ-

                          ಯಥೋಕ್ತಂ ನಂದಿಕೇರ್ಶವರಮತೇ-
                          ಷೋಡಶಸ್ವಪಿ ವರ್ಣೀಷು ಭೇದಾಃ ಪಂಚದಶೋದಿತಾಃ|
                          ತಾಡನೇ ಗೃಹಸಂಧಾನ ಮೋಕ್ಷೇ ಮುಖಚತುಷ್ಟಯಂ||

	ರಘುನಾಥ ನಂದೀಕೇಶ್ವರ ಮತ್ತು ಭರತರ ಮತಗಳಿಗೆ ಬಹಳ ವ್ಯತ್ಯಾಸವಿದೆ ಎಂದು ಹೇಳಿದ್ದಾನೆ. ಕಲ್ಲಿನಾಥ ಭರತನ ಅಭಿಪ್ರಾಯಗಳನ್ನು ನಂದಿಕೇಶ್ವರನ ಅಭಿಪ್ರಾಯಗಳೊಡನೆ ತುಲನೆ ಮಾಡಿದ್ದಾನೆ. ನಂದಿಯ ಹೆಸರಿನಲ್ಲಿ ಎರಡು ಬಗೆಯ ಕೃತಿಗಳಿದ್ದು ಒಂದು ಬಗೆಯ ಅಭಿಪ್ರಾಯ ಭರತನಿಗೆ ಸಮ್ಮತವಾಗಿದ್ದು ಮತ್ತೊಂದು ಭಿನ್ನವಾಗಿವೆ. ರಘುನಾಥ ಸೂಚಿಸುವ ನಂದೀಶ್ವರಸಂಹಿತೆ ದೊರೆಯುವವರೆವಿಗೆ ಭರತಾರ್ಣವ ನಂದಿಕೇಶ್ವರನದೋ ಅಲ್ಲವೋ ನಿರ್ಣಯಿಸುವುದು ಸಾಧ್ಯವಾಗುವುದಿಲ್ಲ.

	ನಂದಿಕೇಶ್ವರನ ಶಾಖೆ ಭರತನ ಶಾಖೆಗಿಂತ ಪ್ರಾಚೀನವೆಂದೂ ಭರತ ನಂದಿಕೇಶ್ವರನ ಅಭಿಪ್ರಾಯಗಳಲ್ಲಿ ತನಗೆ ಒಪ್ಪಿಗೆಯಾದವನ್ನು ಮಾತ್ರ ಸ್ವೀಕರಿಸಿದ್ದಾನೆ ಎಂದೂ ಕೆಲವು ವಿಮರ್ಶಕರು ಅಭಿಪ್ರಾಯಪಡುತ್ತಾರೆ.

	ನಟರಾಜನಾದ ಶಿವ ನಾಟ್ಯದ ಪ್ರಭು. ನಾಟ್ಯಶಾಸ್ತ್ರ ನಟರಾಜನಿಂದ ಬಂದುದು. ಅವನೇ ನಾಟ್ಯಶಾಸ್ತ್ರದ ಪ್ರಥಮ ಕರ್ತೃ. ನರ್ತನದ ಕೊನೆಯಲ್ಲಿ ಆತನ ಡಮರುಗದಿಂದ ಬಂದ ಹದಿನಾಲ್ಕು ಧ್ವನಿಗಳು ಮಾಹೇಶ್ವರ ಸೂತ್ರಗಳೆನಿಸಿದವು. ಈ ಸೂತ್ರಗಳೇ ಪಾಣಿನಿಯ ವ್ಯಾಕರಣರಚನೆಗೆ ಬುನಾದಿಯಾದುವು. ನಂದಿಕೇಶ್ವರ ಈ ಸೂತ್ರಗಳನ್ನವಲಂಬಿಸಿ 27 ಶ್ಲೋಕಗಳ ಕಾರಿಕೆಗಳನ್ನು ಬರೆದಿದ್ದಾನೆ ಮತ್ತು ಅವುಗಳ ಮಹತ್ವವನ್ನು ಪ್ರತಿಪಾದಿಸಿದ್ದಾನೆ. ಕಾರಿಕೆಗಳ ಪ್ರಾರಂಭದಲ್ಲಿ-

             ನೃತ್ತಾವಸಾನೇ ನಟರಾಜರಾಜೋ ನ ನಾದ ಢಕ್ಕಾಂ ನವಪಂಚವಾರಂ|

             ಉದ್ಧರ್ತುಕಾಮಸ್ಸನಕಾದಿಸಿದ್ಧಾನೇತದ್ವಿಮರ್ಶೇ ಶಿವಸೂತ್ರಜಾಲಂ||
ಎಂಬ ಪದ್ಯವಿದೆ. ಇದೇ ಪದ್ಯವನ್ನು ನಾಗೇಶ ತನ್ನ ಶಬ್ದೇಂದುಶೇಖರದಲ್ಲಿ ಉದ್ಧರಿಸಿದ್ದಾನೆ.

	ಅಭಿಮನ್ಯುವೇ ಮುಂತಾದವರು ಈ ಕಾರಿಕೆಗಳಿಗೆ ವ್ಯಾಖ್ಯಾನ ಬರೆದಿದ್ದಾರೆ. ನಾದಮೂಲವಾದ ಎಲ್ಲ ಶಾಸ್ತ್ರಕ್ಕೂ ಶಿವನೇ ಜನಕ. ನಾದ ಅಥವಾ ಧ್ವನಿಯನ್ನು ಅವಲಂಬಿಸಿಯೇ ವ್ಯಾಕರಣ ಮತ್ತು ಸಂಗೀತ ಶಾಸ್ತ್ರಗಳು ಬೆಳೆದಿವೆ. ನಾದಗಳೇ ಸಂಗೀತಕ್ಕೆ ಮೂಲ ಎಂಬ ಬಗ್ಗೆ ರುದ್ರಢಮರೂದ್ಭವಸೂತ್ರವಿವರಣಂನಲ್ಲಿ ವಿಸ್ತಾರವಾದ ವಿವರಣೆಯಿದೆ. ಅಭಿನಯಕ್ಕೂ ತಾಳಾದಿಗಳಿಗೂ ಶಿವನೇ ಮೂಲ. ಈ ವಿದ್ಯೆಯನ್ನು ಶಿವ ನಂದಿಕೇಶ್ವರನಿಗೆ ಉಪದೇಶಿಸಿದನೆಂಬ ಅಭಿಪ್ರಾಯವಿದೆ. ನಂದಿಕೇಶ್ವರನ ಬಗ್ಗೆ ಇಷ್ಟೆಲ್ಲ ವಿವರಗಳು ದೊರೆಯುವುದಾದರೂ ಅಭಿನಯದರ್ಪಣ, ಸಂಗೀತಶಾಸ್ತ್ರ ಮತ್ತು ಕಾಮಶಾಸ್ತ್ರಗಳ ಕರ್ತೃ ಈತನೆಂದ ಅಭಿಪ್ರಾಯ ಪಡಲಾಗಿದೆಯಾದರೂ ದೊರೆತಿರುವ ಗ್ರಂಥ ಮಾತ್ರ ಅಭಿನಯ ದರ್ಪಣ ಒಂದೆ.

	ಅಭಿನಯದರ್ಪಣದಲ್ಲಿ ನಾಟ್ಯ, ನೃತ್ಯ ಮತ್ತು ನೃತ್ಯಗಳ ಲಕ್ಷಣವನ್ನೂ ಅವನ್ನು ಪ್ರಯೋಗಿಸುವ ಸಮಯವನ್ನೂ ವಿವರಿಸಲಾಗಿದೆ. ಸಭಾಪತಿ, ಮಂತ್ರಿ, ಸಭೆ, ಪಾತ್ರಗಳು, ಕಿಂಕಿಣವೀ, ಪ್ರಾರ್ಥನೆ, ಪೂರ್ವರಂಗ- ಮುಂತಾದ ವಿವರಣೆಗಳಿವೆ. ಅಭಿನಯದ ವಿಧಗಳಾದ ಆಂಗಿಕ, ವಾಚಿಕ, ಆಹಾರ್ಯಕ ಮತ್ತು ಸಾತ್ವಿಕ ಎಂಬ ನಾಲ್ಕು ವಿಭಾಗಗಳನ್ನು ಸವಿಸ್ತಾರವಾಗಿ ಪ್ರಸ್ತಾಪಿಸಲಾಗಿದೆ. 1ರಿಂದ 48ರ ವರೆಗಿನ ಶ್ಲೋಕಗಳು ಪೀಠಿಕಾರೂಪವಾಗಿದ್ದು ಮೇಲಿನ ವಿಷಯಗಳನ್ನು ಪರಿಚಯಿಸುತ್ತವೆ.

	ತರುವಾಯ ಶಿರೋಭೇದಗಳು, ದೃಷ್ಟಿಭೇದಗಳು ಮತ್ತು ಗ್ರೀವಾಭೇದಗಳನ್ನು ಕ್ರಮವಾಗಿ ನಿರೂಪಿಸಲಾಗಿದೆ. ಶ್ಲೋಕ 87ರಿಂದ 258ರ ವರೆಗೆ ವಿಸ್ತಾರವಾಗಿ ಹಸ್ತಭೇದಗಳನ್ನು ವಿವರಿಸಲಾಗಿದೆ. ಈ ಕೃತಿಯ ಹೆಚ್ಚು ಭಾಗ ಕರವಿನ್ಯಾಸವನ್ನು ವಿವರಿಸುವುದಕ್ಕೆ ಮೀಸಲಾಗಿದೆ. ಮತ್ಸ್ಯಾದಿ ದಶಾವತಾರ ಹಸ್ತಗಳು, ರಾಕ್ಷಸಾದಿ ಜಾತೀಯ ಹಸ್ತಗಳು, ಮಾತ್ರಾದಿ ಬಾಂಧವ ಹಸ್ತಗಳು ಮತ್ತು ಚಂದ್ರಾದಿ ನವಗ್ರಹ ಹಸ್ತಗಳನ್ನು ವಿವರಿಸಲಾಗಿದೆ.

	ಅನಂತರ ಪಾದಭೇದಗಳು, ಮಂಡಲಭೇದಗಳು, ಸ್ಥಾನಕಭೇದಗಳು, ಉತ್ಪ್ಲವನ ಭೇದಗಳು, ಭ್ರಮರೀಭೇದಗಳು, ಚಾರಿಭೇದಗಳು ಮತ್ತು ಗತಿಭೇದಗಳನ್ನು ಕ್ರಮವಾಗಿ ನಿರೂಪಿಸಲಾಗಿದೆ (ಶ್ಲೋಕ 250ರಿಂದ 308). ಇವು ಏಕೈಕ ಭೇದ ಸಂಬಂಧದಿಂದ ಅನಂತವಾಗುತ್ತವೆಂದು ಹೇಳಲಾಗಿದೆ. ಇವನು ಶಾಸ್ತ್ರ ಮತ್ತು ಸಜ್ಜನರ ಅನುಗ್ರಹದಿಂದಲೇ ತಿಳಿಯಬೇಕೆಂಬ ಮಾತಿನಿಂದ ಗ್ರಂಥ ಮುಗಿದಿದೆ.

	ಇದರ ಭಾಷೆ ಸುಲಭ; ಶೈಲಿ ಸರಳ. ನಿರೂಪಣಾಕ್ರಮ ಸುಲಭವಾಗಿದ್ದು ಓದುಗರ ಮನಮುಟ್ಟುವಂತೆ ವಿವರಣಾ ತ್ಮಕವಾಗಿದೆ. ಎಲ್ಲ ಶ್ಲೋಕಗಳೂ ಅನುಷ್ಟುಪ್ ಛಂದಸ್ಸಿನಲ್ಲಿದೆ. ಒಂದು ಹಸ್ತಪ್ರತಿಯಲ್ಲಿ ರಸಗಳು ಮತ್ತು ಅವಸ್ಥಾ ಭೇದಗಳನ್ನು ತಿಳಿಸುವ 14ಶ್ಲೋಕಗಳು ಅಧಿಕವಾಗಿವೆ. ಹಸ್ತಪ್ರತಿಗಳು ಹೇರಳವಾಗಿರುವುದರಿಂದ ಪಾಠಾಂತರಗಳೂ ಅಧಿಕವಾಗಿವೆ. ಮನಮೋಹನ ಘೋಷ್ ಸಂಪಾದಿಸಿ ಪ್ರಕಟಿಸಿರುವ ಕೃತಿಯಲ್ಲಿ ಹಸ್ತಭೇದಗಳ 57 ಚಿತ್ರಗಳಿವೆ.	
	(ಎಚ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ